Anna
ಅನ್ನತೋ ಪ್ರಾಣ: ಪ್ರಾಣತೋ ಪರಬ್ರಹ್ಮ, ಅನ್ನಂ ಪರಬ್ರಹ್ಮ ಸ್ವರೂಪಿಣಿ ಈ ಉಕ್ತಿಗಳು ಅನ್ನಕ್ಕಿರುವ ಶಕ್ತಿ ಹಾಗೂ ಅದಕ್ಕಿರುವ ಗೌರವವನ್ನು ತಿಳಿಸುತ್ತವೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ನಮ್ಮೆಲ್ಲರಿಗೂ ಮೊದಲಿಗೆ ದುಡಿಯಬೇಕು ಎನ್ನುವ ಕಿಚ್ಚು ಹಚ್ಚಿದ್ದೇ ಈ ಹಸಿವಲ್ಲವೇ? ತಟ್ಟೆ ತುಂಬ ಹೊಟ್ಟೆ ತುಂಬ ಈ ಅನ್ನ ಪಡೆಯುವುದಕ್ಕಾಗಿ ಅಲ್ಲವೇ?,
ಹಸಿವಿದ್ದವನಿಗೆ ಮಾತ್ರ ಅನ್ನದ ಬೆಲೆ ಹಾಗೂ ಅದರ ರುಚಿ ಎರಡು ತಿಳಿಯುವುದು ಆದರೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಾವಿರಗಟ್ಟಲೆ ಹಣ ಕೊಟ್ಟು ಒಂದಿಡಿ ಆರ್ಡರ್ ಮಾಡಿ ಅದರಲ್ಲೂ ಅರ್ಧವನ್ನು ಪ್ರೆಸ್ಟೀಜ್ ಎನ್ನುವ ದು’ರ’ಹಂ’ಕಾ’ರದಲ್ಲಿ ಬಿಡುವ ಈಗಿನ ಮಕ್ಕಳಿಗೇನು ಗೊತ್ತು, ಇದೇ ಹಿಡಿ ಅನ್ನಕ್ಕಾಗಿ ಹಿಂದೆ ಎಷ್ಟು ಕ’ಷ್ಟ, ಅ’ವ’ಮಾ’ನ, ಸಂ’ಕ’ಟ, ವೇ’ದ’ನೆ, ಸಂ’ಘ’ರ್ಷ ಎಲ್ಲವನ್ನು ನಮ್ಮ ಹಿರಿಯರು ಅನುಭವಿಸಿದ್ದರು ಎಂದು.
ನಾವೇನೂ ಸ್ವಾತಂತ್ರ್ಯ ಪೂರ್ವ ಕಥೆ ಹೇಳುತ್ತಿಲ್ಲ ನಮ್ಮ ತಂದೆ ಅಥವಾ ಸಹೋದರರ ಬಾಲ್ಯದ ದಿನಗಳಲ್ಲಿ ಅನ್ನ ಎಂದರೆ ಹೇಗಿತ್ತು ಎಂದು ಕೇಳಿ ನೋಡಿ ಸಾಕು. ಅನ್ನವನ್ನು ಇಷ್ಟು ತಾತ್ಸಾರವಾಗಿ ಕಾಣುವವರಿಗೆ ಆಗಲಾದರೂ ಅದರ ಬೆಲೆ ಅರಿವಾಗಬಹುದು.
ಈ ವಸ್ತುಸ್ಥಿತಿಗೆ ಸಂಬಂಧಿಸಿದ ಚಿತ್ರವೊಂದು ಕನ್ನಡದಲ್ಲಿ ತೆರೆ ಕಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹನೂರು ಚನ್ನಪ್ಪ (Hanur Chennappa) ಅವರ ಅನ್ನ ಕಥಾ ಸಂಕಲನದ ಎಳೆಯನ್ನು ಇಟ್ಟುಕೊಂಡು ಅನ್ನ (Anna Movie) ಎನ್ನುವ ಹೆಸರಿನಲ್ಲಿಯೇ ಮಾದಪ್ಪನ ಕಾಡಿನ ಮಕ್ಕಳೆಲ್ಲ ತಂಡ ಕಟ್ಟಿಕೊಂಡು ಅನ್ನ ಚಿತ್ರ ಕಟ್ಟಿದ್ದಾರೆ.
80ರ ದಶಕದಲ್ಲಿ ಮೂಡಲು ಸೀಮೆ ಎಂದು ಕರೆಸಿಕೊಳ್ಳುವ ಚಾಮರಾಜನಗರ, ಕೊಳ್ಳೆಗಾಲ, ಹನೂರು ಭಾಗದಲ್ಲಿ ಮನೆ ಮನೆಗಳಲ್ಲಿ ಅನ್ನದ ತವಕ ಎಷ್ಟಿತ್ತು? ಶ್ರೀಮಂತರಿಗೂ ದುಬಾರಿಯಾಗಿದ್ದ, ಬಡವರಿಗೆ ಕನಸಾಗಿದ್ದ, ಮಕ್ಕಳಿಗೆ ಸಿಹಿಯಾಗಿದ್ದ, ಬಸರಿಗೆ ಬಯಕೆಯಾಗಿದ್ದ ಅನ್ನವೇ ಚಿನ್ನ ವಾಗಿದ್ದ ಆ ಕಾಲಘಟ್ಟ ಹೇಗಿತ್ತು ಎನ್ನುವುದನ್ನು ಮಾತನಾಡುವುದಕ್ಕೂ ಕೇಳುವುದಕ್ಕೂ ಇಂಪಾಗಿರುವ ಚಾಮರಾಜನಗರ ಭಾಷಾ ಶೈಲಿಯಲ್ಲಿ ಹಳ್ಳಿ ಸೊಗಡಿನಲ್ಲಿ ಚಿತ್ರಿಕರಿಸಿ ತೆರೆಗೆ ತರಲಾಗಿದೆ.
ಮಾದೇವ ಎನ್ನುವ ಎಂಟರ ಹರೆಯದ ಹೈದನೊಬ್ಬನ ಹಗಲಿರುಳ ಅನ್ನದ ಹಂಬಲಿಕೆ ಸುತ್ತ ಕತೆ ಹೆಣೆದಿದ್ದರು ಜೊತೆ ಜೊತೆಗೆ ತಿಳಿಹಾಸ್ಯ, ತಾಯಿಯ ಮಗನ ಸೆಂಟಿಮೆಂಟ್, ರೈತನ ಮಹತ್ವ, ಅನ್ನದ ಬೆಲೆ ಎಲ್ಲವನ್ನು ಅರ್ಥೈಸಿ ಸಂದೇಶ ದಾಟಿಸಲಾಗಿದೆ. ಇದೇ ಸೆಪ್ಟೆಂಬರ್ 6ರಂದು ತೆರೆ ಕಂಡಿರುವ ಈ ಚಿತ್ರವು ಎರಡನೇ ವಾರವೂ ಯಶಸ್ವಿಯಾಗಿ ಮುನ್ನುಗುತ್ತಿದೆ.
ಡಾ. ರಾಜಕುಮಾರ್ ಅವರು ಕೂಡ ಅವರ ಸಿನಿಮಾ ಕೆರಿಯರ್ ಆರಂಭದ ದಿನದಲ್ಲಿ ಎರಡು ಇಡ್ಲಿ ಹೆಚ್ಚಿಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಒಂದು ಸಿನಿಮಾವನ್ನು ಹಿಂದೆ ಮುಂದೆ ಏನು ಕೇಳದೆ ಒಪ್ಪಿಕೊಂಡಿದ್ದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಹೀಗೆ ನಮ್ಮ ನಿಮ್ಮಲ್ಲಿ ಅನ್ನಕ್ಕಾಗಿ ಕಷ್ಟ ಪಟ್ಟ ಅನೇಕರಿಗೆ ಖಂಡಿತ ಈ ಸಿನಿಮಾ ಕನೆಕ್ಟ್ ಆಗುತ್ತದೆ. ಸಿನಿಮಾ 80ರ ಕಥೆ ಹೇಳುತ್ತಿದ್ದರು ನೋಡುವ ಪ್ರತಿಯೊಬ್ಬರೂ ಒಂದಲ್ಲ ಒಂದು ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದರಲ್ಲಿ ಅನುಮಾನವಿಲ್ಲ.
ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿದ್ದ ಚಿಕ್ಕಮ್ಮನ ಮಗಳಿಗೋ ಅಕ್ಕನ ಮಗುವಿಗೋ ಅನ್ನ ಮಾಡಿದವರ ಮನೆಯಿಂದ ಒಂದು ಹಿಡಿ ಬಿಸಿ ಅನ್ನ ಅವ್ವ ತರುತ್ತಿದ್ದದ್ದು , ಅನ್ನ ಮಾಡಿ ಗಂಜಿಯನ್ನು ಕೂಡ ಬಿಸಾಕದೆ ಉಪ್ಪು ಹಾಕಿ ಕೊಡುತ್ತಿದ್ದದ್ದು, ಹಬ್ಬ ಹರಿದಿನಗಳಲ್ಲಿ ಬಿಳಿ ದೋಸೆ ಬೇಕು ರಾಗಿ ದೋಸೆ ಬೇಡ ಎಂದು ರಚ್ಚೆ ಹಿಡಿದಿದ್ದು,
ನಾನು ಇಟ್ಟು ಉಣ್ಣುವುದಿಲ್ಲ, ಇಟ್ಟುಂಡು ಮೇಲೆ ಎಷ್ಟು ಅನ್ನ ಕೊಡುತ್ತಿದ್ದೆ ಅಷ್ಟೇ ಇಕ್ಕು ಸಾಕು ಎಂದು ಕೇಳಿದ್ದು ನೆನಪಿರಬಹುದು. ನೀವು ಥಿಯೇಟರ್ ನಲ್ಲಿ ಈ ಸಿನಿಮಾ ಕಂಡಾಗ ಹಳೆ ದಿನಗಳ ನೆನಪಿನ ಬುತ್ತಿ ತೆರೆದು ಇಂದು ಇರುವ ಅನುಕೂಲತೆಗೆ ನಿಟ್ಟಿಸಿರು ಬಿಟ್ಟು ಕಣ್ಣಂಚಲಿ ನೀರು ತುಂಬಿಕೊಳ್ಳುವಷ್ಟರ ಮಟ್ಟಿಗೆ ಖಂಡಿತ ಆಪ್ತವಾಗುತ್ತದೆ ಅನ್ನ ಚಿತ್ರ.
ಅಷ್ಟರ ಮಟ್ಟಿಗೆ ಪದ್ಮಶ್ರೀ, ನಂದನ್, ಸಂಪತ್ ಮೈತ್ರಿಯ ಸೇರಿದಂತೆ ಸಿನಿಮಾದಲ್ಲಿರುವ ಪ್ರತಿಯೊಂದು ಪಾತ್ರವು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಯಾರು ಅಭಿನಯಿಸದೆ ಪಾತ್ರಗಳನ್ನು ಜೀವಿಸಿ, ನೈಜ ಅಭಿನಯದಿಂದ ನಮ್ಮೆದುರೆ ಸನ್ನಿವೇಶ ನಡೆಯುತ್ತಿದೆಯೇನೋ ಎನಿಸುವಂತೆ ಮೋಡಿ ಮಾಡಿದ್ದಾರೆ.
ಸಿನಿಮಾ ಮುಗಿದ ಮೇಲೂ ಅದೇ ಗುಂಗಿನಲ್ಲಿರುವಂತೆ ಕಥೆ ಕಾಡುವಂತೆ ಕಣ್ ಕಟ್ಟುವ ಹಾಗೆ ನಿರ್ದೇಶಕರಾದ ಇಸ್ಲಾಹುದ್ದಿನ್ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಕಂದೇಗಾಲ ರವರ ಸಂಗೀತ ನಿರ್ದೇಶನದಲ್ಲಿ ಸಿನಿಮಾದಲ್ಲಿ ಜಾನಪದ ಗೀತೆ, ರೈತ ಗೀತೆ ಸೇರಿದಂತೆ 5 ಸುಮಧುರ ಗೀತೆಗಳು ಕೂಡ ಇವೆ. ಪರಭಾಷೆಯಲ್ಲಿ ಈ ಮಾದರಿ ಸಿನಿಮಾ ಬಂದಾಗ ಹೊತ್ತಿ ಮರೆಸುವ ನಾವು ತಪ್ಪದೇ ಸಾಮಾಜಿಕ ಸಂದೇಶ ಹೊತ್ತಿರುವ ಈ ಕಲಾತ್ಮಕ ಚಿತ್ರವನ್ನು ಚಿತ್ರಮಂದಿರಗಳಿಗೆ ಹೋಗಿ ಕುಟುಂಬ ಸಮೇತ ನೋಡಿ ಗೆಲ್ಲಿಸಬೇಕು.
ನಿಮ್ಮ ಮನೆಯ ಹಿರಿಯರಿಗೆ ಮತ್ತೊಮ್ಮೆ ಅವರ ಹಳೆಯ ದಿನಗಳಿಗೆ ಕರೆದೊಯ್ಯಲು ಕಿರಿಯರಿಗೆ ಅನ್ನದ ಮಹತ್ವ ಅನ್ನ ಪಡೆಯಲು ಇರುವ ಶ್ರಮ ತಿಳಿಸಲು ತಪ್ಪದೇ ಥಿಯೇಟರ್ ಗೆ ಕರೆತಂದು ಸಿನಿಮಾ ತೋರಿಸಿ. ಆ ಮೂಲಕ ಈ ನೆಲದ ಕಥೆಗಳನ್ನು ಬೆಂಬಲಿಸಿ ಎಂದು ನಮ್ಮ ಲೇಖನದ ಮೂಲಕ ಕೇಳಿಕೊಳ್ಳುತ್ತಿದ್ದೇವೆ.