Dr Rajkumar
ಮಲ್ಟಿ ಸ್ಟಾರ್ಸ್ ಸಿನಿಮಾ (Multistars Cinema) ನೋಡುವುದೇ ಕಣ್ಣಿಗೆ ಒಂದು ಹಬ್ಬ. ಅದರಲ್ಲೂ ಸೂಪರ್ ಸ್ಟಾರ್ ಗಳು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡರೆ ಆ ದೃಶ್ಯ ವೈಭವ ಹೇಗಿರುತ್ತದೆ ಅಲ್ಲವೇ? ಕನ್ನಡದಲ್ಲಿ ಸಾಕಷ್ಟು ಮಲ್ಟಿ ಸ್ಟಾರ್ ಸಿನಿಮಾಗಳು ಬಂದಿದೆ ಮತ್ತು ಆ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಲ್ ಕೂಡ ಮಾಡಿವೆ. ಆದರೆ ಈ ನಡುವೆ ಕನ್ನಡಿಗರಿಗೆ ಕೊನೆವರೆಗೂ ನಿರಾಸೆಯಾದ ಒಂದು ಚಿತ್ರದ ಕಥೆ ಇದೆ.
ಈ ಚಿತ್ರದಲ್ಲಿ ರಾಜಕುಮಾರ್, ಶಂಕರ್ ನಾಗ್, ಅಂಬರೀಶ್ ಮತ್ತು ವಿಷ್ಣುವರ್ಧನ್ ರವರು (Rajkumar, Shankarnag, Ambarish, Vishnuvardhan) ನಟಿಸಬೇಕಿತ್ತು. ಕೇಳಿದ ತಕ್ಷಣವೇ ನಮಗೆ ಬೇಸರವಾಗುತ್ತದೆ ಅಲ್ಲವೇ? ನಮ್ಮನ್ನು ನಿರಾಸೆಗೊಳಿಸಿದ ಈ ಚಿತ್ರ ಯಾವುದು? ಕಥೆ ಏನು? ಇದೆಲ್ಲ ಮಾಹಿತಿ ಬಗ್ಗೆ ಈ ಚಿತ್ರ ಡೈರೆಕ್ಷನ್ ಮಾಡಬೇಕಿದ್ದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬುರವರು (Director Rajendra Singh Babu) ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆಗ ಮಲ್ಪಿ ಸ್ಟಾರ್ ಸಿನಿಮಾ ಟ್ರೆಂಡ್ ಆಗಿತ್ತು, ಹಿಂದಿಯಲ್ಲಿ ಧರ್ಮೇಂದ್ರ ಹಾಗೂ ಅಮಿತಾಬ್, ತಮಿಳಿನಲ್ಲಿ ರಜನಿ ಮತ್ತು ಕಮಲಹಾಸನ್ ಚಿತ್ರಗಳು ಬಂದಿದ್ದವು. ನಾನು ಸಹ ಖ್ಯಾತ ಸಾಹಿತಿ ವಿಜಯ್ ಸಾಸನೂರ ಅವರ ಕಾದಂಬರಿ ಆಧಾರವಾಗಿ ಇಟ್ಟುಕೊಂಡು ಯುದ್ಧ (Yudda) ಎನ್ನುವ ಒಂದು ಸಿನಿಮಾ ಮಾಡಲು ನಿರ್ದರಿಸಿದ್ದೆ.
ಇದರಲ್ಲಿ ಮೂರು ಪ್ರಮುಖ ಪಾತ್ರಗಳು ಇದ್ದವು. ಹಾಗಾಗಿ ಈ ಪಾತ್ರಗಳಿಗೆ ಶಂಕರ್ ನಾಗ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಹಾಕಿಕೊಳ್ಳೋಣ ಎಂದು ತೀರ್ಮಾನವಾಗಿ ಒಂದು ಹಂತಕ್ಕೆ ಮಾತುಕತೆಯಾಗಿತ್ತು. ಈ ವಿಷಯ ಅಣ್ಣಾವ್ರ ತನಕ ತಲುಪಿದ ಮೇಲೆ ಅವರು ಕೂಡ ಕಥೆ ಇಷ್ಟಪಟ್ಟು ತಾವು ನಟಿಸುವುದಾಗಿ ಹೇಳಿದರು. ಆದರೆ ಕಥೆಯಲ್ಲಿ ಮೂರು ನಾಯಕರಿಗೆ ಮಾತ್ರ ಪಾತ್ರವಿತ್ತು. ಮೂರು ಜನರೂ ನನ್ನ ಆತ್ಮೀಯರು ಯಾರನ್ನು ಕೈಬಿಡುವುದು ಎನ್ನುವುದೇ ದೊಡ್ಡ ಸವಾಲಿನ ಕೆಲಸವಾಯಿತು.
ಯಾರನ್ನು ತೆಗೆದು ಹಾಕಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಕೊನೆಗೆ ಈ ಪಾತ್ರಗಳಿಗೆ ಸಮತೂಕದ ಮತ್ತೊಂದು ಪಾತ್ರ ಕಟ್ಟುವ ಪ್ರಯತ್ನ ಮಾಡಿದೆ, ಅಣ್ಣಾವ್ರಿಗೆ ಪೊಲೀಸ್ ಪಾತ್ರ ನೀಡಲಾಯಿತು. ಸಿನಿಮಾ ಇನ್ನೇನು ಸೆಟ್ಟೇರಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಗಾಂಧಿನಗರದ ಗಲ್ಲಿಗಳಲ್ಲಿ ಗುಸು-ಗುಸು ಆರಂಭವಾಗಿ ಅಣ್ಣಾವ್ರು-ವಿಷ್ಣು ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಾಯಿತು.
ಆನಂತರ ಬಂದ ಮಾತುಗಳಲ್ಲಿ ಅಣ್ಣಾವ್ರ ಕಿವಿಗೂ ಕೆಲವು ಮಾತುಗಳು ಬಿದ್ದು ಅಣ್ಣಾವ್ರು ವಿಷ್ಣು ಒಟ್ಟಿಗೆ ಅಭಿನಯಿಸಿದರೆ ಸಮಸ್ಯೆ ಆಗುತ್ತದೆ ಎನ್ನುವ ಚಕಾರ ಆರಂಭವಾದ ಕಾರಣ ಅಣ್ಣಾವ್ರೇ ಸಿನಿಮಾದಿಂದ ಹಿಂದೆ ಸರಿಯಲು ನಿರ್ಧರಿಸಿದರು. ಈಗಾಗಲೇ ಇಷ್ಟೆಲ್ಲ ಸುದ್ದಿಯಾಗಿದ್ದರಿಂದ ಅವರನ್ನು ಬಿಟ್ಟು ಅಥವಾ ಇತರ ಮೂರು ಪಾತ್ರಗಳಲ್ಲಿ ಯಾರನ್ನೇ ಬಿಟ್ಟು ಸಿನಿಮಾ ಮಾಡಿದರು ಅದು ಸಮಾಧಾನ ತರುತ್ತಿರಲಿಲ್ಲ. ಹಾಗಾಗಿ ವಿವಾದವೇ ಬೇಡ ಎಂದು ಸಿನಿಮಾವನ್ನೇ ಕೈಬಿಟ್ಟೆ ಎಂದು ಹೇಳಿದ್ದಾರೆ
ವಿಜಯ್ ಸಾಸನೂರ ಅವರ ಹಲವು ಕಾದಂಬರಿಗಳು ಸಿನಿಮಾ ಆಗಿವೆ. ಶಬ್ದವೇದಿ, ಧ್ರುವತಾರೆ ಜ್ವಾಲಾಮುಖಿ ಇತ್ಯಾದಿಗಳನ್ನು ಹೆಸರಿಸಬಹುದು ಹಾಗೆ ರಾಜೇಂದ್ರ ಸಿಂಗ್ ಬಾಬು ರವರು ಕೂಡ ಕಾದಂಬರಿತ ಆಧಾರಿದ ಸಿನಿಮಾಗಳನ್ನು ಮಾಡಿ ಗೆದ್ದವರು. ಇವರೆಲ್ಲರ ಟೀಮ್ ನಲ್ಲಿ ಯುದ್ಧ ಸಿನಿಮಾ ಮೂಡಿ ಬಂದಿದ್ದರೆ ಇಂದು ಮಾತನಾಡಲು ಅದೆಷ್ಟು ವಿಚಾರಗಳು ಸಿಗುತ್ತಿತ್ತೋ?ಆದರೆ ಕನ್ನಡಿಗರಿಗೆ ಈ ವಿಚಾರವಾಗಿ ಅಪಾರ ನಿರಾಸೆಯಾಗಿದೆ. ಈಗಲೂ ಮಲ್ಟಿ ಸ್ಟಾರ್ ಸಿನಿಮಾ ಕ್ರೇಜ್ ಕಡಿಮೆಯಾಗಿಲ್ಲ.
ಈಗಿನ ಕನ್ನಡದ ಸ್ಟಾರ್ ಹೀರೋಗಳು ಒಟ್ಟಿಗೆ ಒಂದಷ್ಟು ಸಿನಿಮಾಗಳನ್ನು ಮಾಡಲಿ, ಚಿತ್ರರಂಗದಲ್ಲಿ ಒಗ್ಗಟ್ಟಿನಿಂದ ಇರಲಿ ಎಂದು ನಾವು ಆಶಿಸೋಣ ಹಾಗೆ ನೀವು ಯಾವ ಸ್ಟಾರ್ ನಾಯಕರುಗಳನ್ನು ಒಟ್ಟಿಗೆ ಒಂದು ಸಿನಿಮಾದಲ್ಲಿ ಕಾಣಲು ಕಾಯುತ್ತಿದ್ದೀರ ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.